Friday, April 23, 2010

ಬರಡು ಮನದ ಬಳಲಿಕೆಗಳು


ಇವು ನನ್ನಯದೆ ಸಾಲುಗಳು
ಬೆಂಬಟ್ಟಿ ಬಂದ ಭಾವನೆಯ ಬಿಂಬಗಳು
ವಿಫಲ ಪ್ರೇಮದ ಪಳೆಯುಳಿಕೆಗಳು
ಬಿಡದೆ ಕಾಡುವ ನೋವಿಗೆ ಸಾಕ್ಷಿಗಳು

ಇವು ಕಿಚ್ಚಿನಿಂದ ರೊಚ್ಚಿಗೆದ್ದು ಕೂಗಿದ ಘೋಷಣೆಗಳು
ಅಸಹಾಯಕತೆಯಿಂದ ತಲೆತಗ್ಗಿಸಿದಾಗ ಸಿಕ್ಕ ಅವಮಾನಗಳು
ದಿಕ್ಕೆಟ್ಟು ನಿಂತಾಗ ಹುಟ್ಟಿಕೊಂಡ ಗೊಂದಲಗಳು
ಸಹಿಸದಾದಾಗ ಮೊಳಕೆಯೊಡೆದ ಸಿಟ್ಟಿನ ಪ್ರತಿರೂಪಗಳು

ಇವು ಹಿಡಿ ಪ್ರೀತಿಗಾಗಿ ಹಂಬಲಿಸಿದ ಕೈಗಳು
ತುಸು ಸಂತೋಷಕ್ಕಾಗಿ ಕೇಳಿಕೊಂಡ ಬೇಡಿಕೆಗಳು
ನನ್ನದೆ ಬದುಕಿನ ಛೀದ್ರ ನೋಟಗಳು
ಖಾಲಿ ಬದುಕಿಗೆ ಬರೆದುಕೊಂಡ ಮರಣ ಶಾಸನಗಳು.

- ವಿಶೇನ

ಹೀಗೊಂದು ಪೀಠಿಕೆ

ಬದುಕಿನಡೆಗಿನ ಪ್ರಶ್ನೆಗಳಿಗೆ ಕೊನೆಯೆಂಬುದಿಲ್ಲ.ಹುಡುಕಾಟವೆಂಬುದಿಲ್ಲಿ ನಿರಂತರ....ಮನದ ಮೂಲೆಯಲ್ಲಿ ಧುತ್ತನೆ ಏಳುವ ದ್ವಂದ್ವಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಬದುಕಿನ ಆಮೂಲ್ಯ ಘಳಿಗೆಗಳು ಕೈಜಾರಿ ಹೋಗಿರುತ್ತವೆ. ಇಲ್ಲಿ ಏನಿದ್ದರು ಭಾವ ರೂಪಕ್ಕಿಂತ ಭಾಹ್ಯ ರೂಪಕ್ಕೆ ಪ್ರಾಶಸ್ತ್ಯ. ತೀರಾ ಆಳಕ್ಕಿಳಿದು ಯಾವುದನ್ನು ನೋಡಬಾರದು. ಇಲ್ಲಿ ನಾನು ಬದುಕಿನೆಡೆಗಿನ ಜಿಗುಪ್ಸೆಯಿಂದ ಈ ಸಾಲುಗಳನ್ನು ಬರೆದಿಲ್ಲ. ಒಂದು ಕೌತುಕ ನನ್ನನ್ನು ಈ ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ. ಇಲ್ಲಿ ಆ ಬೆರಗನ್ನು ಬಿಡಿಸಿಡುವ ಪ್ರಯತ್ನ ಜಾರಿ. ನೀವು ಕೈ ಜೊಡಿಸಿ.............